ತೈಲಚಿತ್ರ -
ವಿಧವಿಧವಾದ ಬಣ್ಣಗಳನ್ನು ಕಲಸಿ ತಯಾರಿಸಿದ ತೈಲ ಮಾಧ್ಯಮವನ್ನು ಬಳಸುವ, ಚಿತ್ರಕಲೆಯ ಒಂದು ಪ್ರಮುಖ ಪ್ರಕಾರ, ಪುರಾತನ ಕಾಲದಿಂದ ಹಿಡಿದು ಈವರೆಗೆ ಚಿತ್ರಕಾರ ಬಳಸುವ ವರ್ಣದ್ರವ್ಯಗಳೇ ಅವನ ಕಲಾರಚನೆಯ ರೂಪರೇಷೆಗಳನ್ನು ನಿರ್ದೇಶಿಸುತ್ತ ಬಂದಿವೆ. ಸಾಮಾನ್ಯವಾಗಿ ಚಿತ್ರರಚನೆಯಲ್ಲಿ ಬೇಗನೆ ಒಣಗಬಲ್ಲ ತೈಲಮಾಧ್ಯಮವನ್ನು ಬಳಸುವುದು ವಾಡಿಕೆ. ಚಿತ್ರವನ್ನು ದೀರ್ಘಕಾಲ ಗಾಳಿಗೆ ಒಡ್ಡಿದಾಗ ತೈಲದ್ರವ್ಯಗಳು ದಟ್ಟವಾದ ಪಾರದರ್ಶಕ ರೂಪತಳೆದು ಬಣ್ಣದ ಕಣಗಳು ಆಧಾರವರ್ಣದ ನೆಲಗಟ್ಟಿನ ಮೇಲೆ ಭದ್ರವಾಗಿ ಅಂಟಿಕೊಳ್ಳುವಂತಾಗುತ್ತವೆ. ಈ ಪಾರದರ್ಶಕ ತೈಲದ್ರವ್ಯಗಳ ಹಾಗೂ ಚಿತ್ರದ ಮೇಲೆ ಬಳಿಯುವ ಮೆರುಗೆಣ್ಣೆಯ ಕಾರಣದಿಂದ ಕಾಲಕ್ರಮೇಣ ಒಂದು ಚಿತ್ರದ ಬಣ್ಣ ಮಾರ್ಪಡುತ್ತ ಹೋಗುವುದುಂಟು; ಇಂದಿಗೂ ಚಿರಸ್ಥಾಯಿಯಾಗಿ ಉಳಿದುಕೊಂಡು ಬಂದಿರುವ ಹಲವು ಪುರಾತನ ಕಲಾವಿದರ ಮೇರು ಕೃತಿಗಳು ಕಂದು ಇಲ್ಲವೇ ಕಪ್ಪು ಬಣ್ಣಕ್ಕೆ ತಿರುಗಿರುವುದು ಈ ಕಾರಣದಿಂದಲೇ.

ಯೂರೋಪಿನ ತೈಲಚಿತ್ರಕಲೆಗೆ ಒಂದು ದೊಡ್ಡ ಇತಿಹಾಸವೇ ಇದೆ ಎನ್ನಬಹುದಾದರೂ ಅದು ಯಾವಾಗ ಎಲ್ಲ ಉಗಮವಾಯಿತೆಂಬುದು ಸ್ಪಷ್ಟವಾಗಿಲ್ಲ. ವಸಾರಿ ಎಂಬ ಪುರಾತನ ಕಲಾಭಿಜ್ಞನ ಪ್ರಕಾರ ತೈಲ ಬೆರೆಸಿ ಚಿತ್ರ ರಚಿಸುವ ವಿಧಾನವನ್ನು ಕಂಡುಹಿಡಿದವ 15 ನೆಯ ಶತಮಾನದ ಫ್ಲಾಂಡರ್ಸ್ ಪ್ರದೇಶದ ಯಾನ್ ವಾನ್ ಐಕ್ಸ್. ಬಿಸಿಲಿಗೆ ಒಡ್ಡದೆ ಬೇಗ ಒಣಗುವ ಗುಣವಿಶೇಷಗಳನ್ನುಳ್ಳ ಅಕ್ಷೋಣ ಹಾಗೂ ನಾರಗಸೆ ಎಣ್ಣೆಗಳನ್ನು ಚಿತ್ರ ರಚನೆಗೆ ಉಪಯೋಗಿಸಿದವರಲ್ಲಿ ಅವನೇ ಮೊದಲಿಗ ಎನ್ನುವುದು ವಸಾರಿಯ ಅಭಿಮತ. ಆದರೆ ಐಕ್ಸ್‍ಗಿಂತ ಹಿಂದೆ, ಅಂದರೆ ಮಧ್ಯಯುಗದ ಸುಮಾರಿನಲ್ಲೇ ತಿಯೋಪಿಲಿಸ್ ಎಂಬಾತ ನಾರಗಸೆ ಎಣ್ಣೆಯೊಂದಿಗೆ ವರ್ಣ ದ್ರವ್ಯಗಳನ್ನು ಅರೆದು ಚಿತ್ರರಚಿಸಲು ಬಳಸುತ್ತಿದ್ದನೆಂದು ತಿಳಿದುಬಂದಿದೆ. ಚಿತ್ರ ಬರೆಯುವಾಗ ಒಂದೊಂದು ವರಸೆ ಬಣ್ಣ ಹಚ್ಚಿದ ಮೇಲೆ ಅದನ್ನು ಗಾಳಿ ಬಿಸಿಲಿನಲ್ಲಿ ಒಣಗಿಸಬೇಕೆಂದು ಅವನು ತಿಳಿಸಿದ್ದ. ಆದ್ದರಿಂದ ಐಕ್ಸ್ ಸೂಚಿಸಿದ ನೂತನ ವಿಧಾನದ ವೈಶಿಷ್ಯ್ಟವೇನೆಂಬುದು ನಮಗೆ ಸ್ಪಷ್ಟವಾಗುವುದಿಲ್ಲ. ಆದರೆ ಅವನು ಚಿತ್ರಕಲೆಯ ತಂತ್ರದಲ್ಲಿ ಅತ್ಯಂತ ಕ್ರಾಂತಿಕಾರಕ ಬದಲಾವಣೆಗಳನ್ನುಂಟುಮಾಡಿದನೆಂಬುದು ಖಚಿತ. ಉಜ್ವಲವಾದ ವರ್ಣ ವಿನ್ಯಾಸ, ಸಾಂದ್ರತೆಯುಳ್ಳ ವರ್ಣಲೇಪನಗಳ ಮೂಲಕ ನೆಳಲುಬೆಳಕುಗಳ ಸೂಕ್ಷ್ಮಾತಿಸೂಕ್ಷ್ಮ ವ್ಯತ್ಯಾಸಗಳನ್ನು ಎದ್ದು ಕಾಣಿಸುವಂತೆ ಮಾಡಿದುದು ಅವನ ವೈಶಿಷ್ಟ್ಯ. ಅವನು ರಚಿಸಿದ ಆರ್ನಾಲ್ಫಿನಿ ಮತ್ತು ಅವನ ಪತ್ನಿ ಎಂಬ ಪ್ರಸಿದ್ಧ ಕಲಾಕೃತಿ ಸಹಜವೂ ಸೂಕ್ಷ್ಮವೂ ಆದ ರೂಪರೇಷೆಗಳಿಂದ ತುಂಬಿ ಹಲವು ಹತ್ತು ಆಯಾಮಗಳನ್ನು ಪಡೆದಿದೆ. ಅವನು ಹಳೆಯ ಸಂಪ್ರದಾಯಕ್ಕನುಸಾರವಾಗಿ ಟೆಂಪರ ಅಥವಾ ಡಿಸ್ಟೆಂಪರ್ (ಎಣ್ಣೆ ಬೆರಸದ ಸಾಮಗ್ರಿ) ಬಣ್ಣವನ್ನು ಉಪಯೋಗಿಸಿದ್ದರೆ ಅಷ್ಟೊಂದು ಅರ್ಥವ್ಯಂಜಕತೆಯನ್ನೂ ವರ್ಣವೈವಿದ್ಯವನ್ನೂ ಸಾಧಿಸಲಾಗುತ್ತಿರಲಿಲ್ಲ.

ಇದೇನೇ ಇರಲಿ, ವರ್ಣಚಿತ್ರಗಳನ್ನು ರಚಿಸಲು ತೈಲವರ್ಣವನ್ನು ಉಪಯೋಗಿಸುವ ರೂಢಿಯನ್ನು ಇಟಲಿಗೆ ತಂದವ 15 ನೆಯ ಶತಮಾನದ ಪ್ರಸಿದ್ಧ ಚಿತ್ರಕಾರ ಆ್ಯಂಟಿನೆಲ್ಲೋಡ ಮೆಸೀನ. ಅವನ ಅನಂತರದ ಚಿತ್ರಕಾರರು ತೈಲವರ್ಣಗಳ ಬಳಕೆಯಲ್ಲಿ ವಿಧವಿಧವಾದ ಸಂಶೋಧನೆಗಳನ್ನು ನಡೆಸಿದುದುಂಟು. ಇಟಲಿಗಿಂತ ಹೆಚ್ಚಾಗಿ ಉತ್ತರ ಯೂರೋಪಿನಲ್ಲಿ ತೈಲವರ್ಣಗಳನ್ನು ವಿಪುಲವಾಗಿ ಬಳಸಲಾಯಿತು. 16 ನೆಯ ಶತಮಾನದವರೆಗೆ ಟೆಂಪರ ಬಣ್ಣದಂತೆಯೇ ತೈಲವರ್ಣವನ್ನು ಬಳಸುವ ಬೆರಕೆಯ ಶೈಲಿಯೂ ರೂಢಿಯಲ್ಲಿತ್ತು. ರೆನೆಸಾನ್ಸ್ ಕಾಲದ ಚಿತ್ರಕಾರರು ಚಿತ್ರದಲ್ಲಿ ವರ್ಣಸಾಮ್ಯ ಕಲ್ಪಿಸಲು ತೆಳ್ಳನೆಯ ಪಾರದರ್ಶಕ ಬಣ್ಣಗಳನ್ನು ಬಳಸುವ ಸಂಪ್ರದಾಯವನ್ನು ಸೃಷ್ಟಿಸಿದರು. ಬಿಳಿಯ ಬಣ್ಣವನ್ನು ತೀರ ವಿರಳವಾಗಿ ಬಳಸುತ್ತ ಬೇರೆ ಬಣ್ಣಗಳನ್ನು ತೆಳುವಾಗಿ ನಾನಾ ಸ್ತರಗಳಾಗಿ ಲೇಪಿಸಿ ಮೇಲ್ಮೈನ ಪಾರದರ್ಶಕತೆಯ ಮೂಲಕ ಬೆಳಕು ಫಲನಗೊಳ್ಳವಂಥ ಅದ್ಭುತ ವರ್ಣಸಂಯೋಜನೆಯನ್ನು ಅವರು ಸಾಧಿಸಿದರು. ಬಣ್ಣದ ಒಂದೊಂದು ಪದರವೂ ಚಿತ್ರದ ವೈವಿದ್ಯವನ್ನೂ ಅರ್ಥವ್ಯಾಪಕತೆಯನ್ನೂ ಎದ್ದುಕಾಣುವಂತೆ ಮಾಡಿದರು. ಚೋವನಿ ಬೆಲ್ಲಿ ನಿಡೋಜೆ ಲಿಯೋನಾರ್ಡೋ ಒರೆಡ್ಯಾನೋ ಮುಂತಾದ ತನ್ನ ಚಿತ್ರಗಳಲ್ಲಿ ಸಾಧಿಸಿರುವ ಉಜ್ವಲ ವರ್ಣ ಸಮೃದ್ಧಿಯೇ ಇದಕ್ಕೆ ಸಾಕ್ಷಿ. ದಟ್ಟವಾಗಿ ಬಣ್ಣ ಹಚ್ಚುವ ಇಂಪ್ಯಾಸ್ಟೋ ಎಂಬ ರಚನಾ ವಿಧಾನವನ್ನು ಕಂಡುಹಿಡಿದವನೂ ಅವನೇ.

ಅವನ ತರುವಾಯ ಬಂದ ಟಿಷನ್ ಮುಂತಾದ ರೆನೆಸಾನ್ಸ್ ಚಿತ್ರಕಾರರು ಚಿತ್ರರಚನಾ ತಂತ್ರದಲ್ಲಿ ಒಂದು ಹೊಸ ವಿಕ್ರಮವನ್ನೇ ಸ್ಥಾಪಿಸಿದರು. ರೆನೆಸಾನ್ಸ್ ಚಿತ್ರಕಾರರು ರೇಖಾವಿನ್ಯಾಸವನ್ನು ಕಡೆಗಣಿಸದರೆಂದು ವಿಮರ್ಶಕ ವಸಾರಿ ಆಕ್ಷೇಪಿಸಿದ್ದರೂ ಅದರ ವರ್ಣವೈಖರಿಯನ್ನು ಮನಸ್ಸಾರೆ ಹೊಗಳಿದ್ದಾನೆ. ಕೇವಲ ಕುಂಚದ ಬೀಸಿನಿಂದ, ಮೇಲುನೋಟಕ್ಕೆ ಒರಟು ಒರಟಾಗಿ ತೋರುವ ವರ್ಣಾಧಾನವನ್ನು ಸಾಧಿಸಿ, ಅತ್ಯಂತ ಸೂಕ್ಷ್ಮವೂ ಜಟಿಲವೂ ಆದ ರೂಪರೇಷೆಗಳನ್ನು ಸೂಚಿಸುವ ರೆನೆಸಾನ್ಸ್ ಚಿತ್ರಕಾರರತಂತ್ರವನ್ನು ವಸಾರಿ ಬಹುವಾಗಿ ಮೆಚ್ಚಿಕೊಂಡಿದ್ದಾನೆ.

17ನೆಯ ಶತಮಾನದ ತೈಲಚಿತ್ರ ರಚನೆಯಲ್ಲಿ ಹೊಸತನ ಮೂಡಿಸಿದವರಂದರೆ ರೂಬೆನ್ಸ್, ವೇಲಾತ್‍ಕೇತ್ ಮತ್ತು ರೆಂಬ್ರಾಂಟ್, ಚಿತ್ರದ ಆಧಾರವರ್ಣಲೇಪಿಸಿದ ಭಾಗದಿಂದಲೋ ಅಥವಾ ಗಾಢವಾಗಿ ಬಣ್ಣ ಹಚ್ಚಿದ ಪದರದ ಮೇಲಿಂದಲೋ ರೆಂಬ್ರಾಂಟ್ ಬೆಳಕು ಮಾರ್ಪೊಳೆಯುವಂತೆ ಮಾಡುತ್ತಾನೆ. ತೆಳುವಾಗಿ ದೃಢವಾಗಿ ಬಣ್ಣವನ್ನು ಹರಡಿ ನೆಳಲು ಬೆಳಕುಗಳ ಸಂಯೋಜನೆಯನ್ನು ಅಥವಾ ರೂಪಿಸುವುದು ಅವನ ರೀತಿ. ರೂಬೆನ್ಸ್‍ಗಿಂತ ಹೆಚ್ಚಾಗಿ ಅವನಿಗೆ ಗಾಡಕಪ್ಪು ಹಿನ್ನೆಲೆ ಸೂಚಿಸುವುದೆಂದರೆ ಬಹಳ ಇಷ್ಟ. ದಟ್ಟವಾಗಿ ಬಣ್ಣ ಲೇಪಿಸಿ ಅರ್ಥಪೂರ್ಣವಾದ ಮೇಲ್ಮೈ ಪದರವನ್ನು ಸೂಚಿಸುವುದರಲ್ಲಿ ಫ್ರಾನ್ಸ್ ಹಾಲ್ಸ್ ಮತ್ತು ವೇಲಾತ್‍ಕೇತ್ ನಿಸ್ಸೀಮರು. ಒಟ್ಟಿನಲ್ಲಿ ಕ್ರಾಂತಿಯುಗವಾದ 19 ನೆಯ ಶತಮಾನಕ್ಕಿಂತ ಹಿಂದಿನ ಯುಗಗಳ ವರ್ಣಶಿಲ್ಪಿಗಳು ಚಿತ್ರರಚನೆಯಲ್ಲಿ ಎರಡು ವಿಭಿನ್ನಮಾರ್ಗಗಳನ್ನು ಅನುಸರಿಸಿದರು. ವರ್ಣವಿನ್ಯಾಸದಲ್ಲಿ ಕುಂಚದ ಹಾಸುಬೀಸುಗಳ ಗುರುತುಗಳನ್ನು ಹಾಗೆಯೇ ಉಳಿಸಿ ಆ ಮೂಲಕ ಒಂದು ಅನನ್ಯ ಸಹಜತೆ ಎದ್ದು ಕಾಣುವಂತೆ ಮಾಡುವುದು ಒಂದು ಮಾರ್ಗವಾದರೆ ಸಂಪೂರ್ಣಗೊಂಡ ಚಿತ್ರದಲ್ಲಿ ಕುಂಚದ ಚಲನವಲನಗಳು ಕಾಣದಂತೆ ನಯಗೊಳಿಸಿ ಹೊಳಪಿಸುವಂತೆ ಮಾಡುವುದು ಇನ್ನೊಂದು ಮಾರ್ಗ.

19 ನೆಯ ಶತಮಾನಕ್ಕಿಂತ ಪೂರ್ವದಲ್ಲಿ ವರ್ಣಚಿತ್ರ ರಚನೆಗಾಗಿ ಚಿತ್ರಕಾರರು ಹಾಗೂ ಅವರ ಸಹಾಯಕ ಸಿಬ್ಬಂದಿಯವರು ಬಣ್ಣಗಳನ್ನು ತಯಾರಿಸಲೆಂದು ತಮ್ಮ ತಮ್ಮ ಕರ್ಮಶಾಲೆಗಳನ್ನು ಏರ್ಪಡಿಸಿಕೊಂಡಿದ್ದರು. ಆದರೆ ಕಳೆದ ಶತಮಾನದಲ್ಲಿ ವಿಶೇಷ ರೀತಿಯಲ್ಲಿ ಬಣ್ಣಗಳನ್ನು ತಯಾರುಮಾಡುವ ಒಂದು ಹೊಸ ವಾಣಿಜ್ಯ ವೃತ್ತಿಯೇ ಅಸ್ತಿತ್ವಕ್ಕೆ ಬಂತು. ವರ್ಣದ್ರವ್ಯಗಳನ್ನು ವಿಶಿಷ್ಟರೀತಿಯ ಅಮುಕು ಕೊಳವಿಗಳಲ್ಲಿ ತುಂಬಿ ಮಾರುವ ಹೊಸ ಪದ್ಧತಿಯೂ ರೂಢಿಗೆ ಬಂತು. ಅದಕ್ಕೆ ಮೊದಲು ಚಿತ್ರಕಾರರು ತಾವು ಬಳಸುವ ಬಣ್ಣಗಳನ್ನು ನಾನಾ ಆಕಾರದ ಬುರುಡೆಗಳಲ್ಲಿ ತುಂಬಿಟ್ಟುಕೊಂಡು ಬಳಸುವ ಸಮಯದಲ್ಲಿ ತುಂಬ ಮುಜುಗರಪಡುತ್ತಿದ್ದರು. ಬಣ್ಣ ಅಮುಕು ಕೊಳವಿಗಳು ಮಾರಾಟಕ್ಕೆ ಬಂದ ಮೇಲೆ ಚಿತ್ರಕಾರರು ವರ್ಣದ್ರವ್ಯವನ್ನು ಬೇಕಾದೆಡೆ ಕೊಂಡೊಯ್ಯುವ ಸೌಕರ್ಯ ಲಭಿಸಿತು. ಇದರಿಂದಾಗಿ ಅವರು ಮನೆಯಿಂದಾಚೆ ಹೋಗಿ ನೇರವಾಗಿ ಪ್ರಕೃತಿ ದೃಶ್ಯಗಳನ್ನು ಕಣ್ಣಾರೆ ಕಂಡು ಬಣ್ಣಿಸುವುದು ಸಾಧ್ಯವಾಯಿತು. ಬಣ್ಣದ ಜೊತೆಯಲ್ಲಿ ಗಸಗಸೆ ಎಣ್ಣೆ ಬೆರಸುವುದನ್ನು ಕಂಡುಹಿಡಿದ ಮೇಲಂತೂ ಚಿತ್ರಕಲೆಯಲ್ಲಿ ತೀರ ಹೊಸ ಬದಲಾವಣೆಗಳುಂಟಾದವು. ಗಸಗಸೆ ಎಣ್ಣೆಯಲ್ಲಿ ಕಲಸಿದ ಬಣ್ಣ ಲೇಪನದ ಅನಂತರ ನಿಧಾನವಾಗಿ ಒಣಗುವುದರಿಂದಲೂ ಹೆಚ್ಚು ಮಂದವೂ ಬೆಣ್ಣೆಯಂತೆ ಸ್ನಿಗ್ದವೂ ಆದ ವರ್ಣದ್ರವವನ್ನು ಅದರಿಂದ ತಯಾರಿಸಲು ಸಾಧ್ಯವಾಗುವುದರಿಂದಲೂ ಚಿತ್ರಕಾರರು ಹೆಚ್ಚು ಸಹಜವಾದ ಆಕಾರ - ಆಯಾಮಗಳನ್ನು ಎತ್ತಿ ತೋರಿಸಿವುದಕ್ಕೆ ಅದು ನೆರವಾಯಿತು. ಕಾಲಕ್ರಮೇಣ ಬಣ್ಣ ತಯಾರಿಸುವವರು ನಾರಗಸೆ ಎಣ್ಣೆಯಲ್ಲಿ ಕಲಸಿದ ಬಣ್ಣದ ಜೊತೆ ರಾಳ, ಮೇಣ, ಲೋಹದ ಪುಡಿ ಮೊದಲಾದವನ್ನು ಬೆರಸಿ ಸಹಜವಾದ ಪರಿಣಾಮ ಸಾಧಿಸಲು ಬೇಕಾದ ವರ್ಣಸಾಮಗ್ರಿಯನ್ನು ಸಿದ್ಧಪಡಿಸಿದರು. ಇದರಿಂದ ಚಿತ್ರಕಾರರು ಉದ್ದಿಷ್ಟ ಪರಿಣಾಮ ಸಾಧಿಸಲು ಬಣ್ಣಗಳನ್ನು ಹಂತ ಹಂತವಾಗಿ ಪಾರದರ್ಶಕ ಪದರಗಳಾಗಿ ಲೇಪಿಸುವುದರ ಬದಲು ಒಮ್ಮೆಲೇ ಬೇಕಾದ ಸಾಂದ್ರತೆಯಲ್ಲಿ ಬಣ್ಣವನ್ನು ಹರಡಿ ಆಕಾರ ಆಯಾಮಗಳನ್ನು ರೂಪಿಸಲು ಅನುಕೂಲವಾಯಿತು. ಹೀಗೆ ನೇರವಾಗಿ ಒಂದೇ ವರಸೆಯಲ್ಲಿ ಬಣ್ಣ ಲೇಪಿಸಿ ಚಿತ್ರರಚಿಸುವ ರೀತಿಯನ್ನು ಅವರು ಅಲಾ ಪ್ರೈಮ ಎಂದು ಕರೆದರು. ಈ ವಿಧಾನದಿಂದಾಗಿ ಚಿತ್ರಕಾರನ ನಿರರ್ಗಳ ಸ್ಫೂರ್ತಿ ಆದೇಶಗಳಿಗೆ ಹೆಚ್ಚು ಅವಕಾಶ ಸಿಕ್ಕುವಂತಾಯಿತು. ಯಾವೊಂದು ಪೂರ್ವಸಿದ್ಧತೆಯಿಲ್ಲದೆ ನೇರಸ್ಫೂರ್ತಿಯಿಂದ ಒಮ್ಮೆಲೇ ಚಿತ್ರ ಬರೆಯುವ ಹೊಸ ಶೈಲಿ ನಿರ್ಮಾಣವಾಯಿತು.  ಆ ಮೊದಲು ಚಿತ್ರ ರಚಿಸುವಾಗ ಹೆಚ್ಚು ಶ್ರಮವಾಗುತ್ತಿತ್ತು. ಅತ್ಯಂತ ಜಾಗರೂಕತೆಯಿಂದ ರೇಖನ ನಕಾಶೆಗಳನ್ನು ತಯಾರಿಸಿ ಆಧಾರವರ್ಣವನ್ನು ಲೇಪಿಸಿ ಅದು ಒಣಗುವುದಕ್ಕಿಂತ ಮುಂಚೆಯೇ ಅದರ ಏಲ ಪದರಪದರವಾಗಿ ಬೇರೆ ಬಣ್ಣಗಳನ್ನು ಅಳಡಿಸಬೇಕಾಗುತ್ತಿತ್ತು. ನೇರಚಿತ್ರಣ ಪದ್ಧತಿಯಿಂದಾಗಿ ಹಂದಿಯ ಕೂದಲು ಮುಂತಾದ ವಸ್ತುಗಳಿಂದ ತಯಾರಿಸಿದ ಒರಟಾದ ದಪ್ಪ ಕುಂಚಗಳನ್ನು ಬಳಸಬೇಕಾಯಿತು. ಚಿತ್ರಕಾರರು ಸಮೃದ್ಧ ಬಣ್ಣ ತುಂಬಿದ ದಪ್ಪ ಕುಂಚಗಳನ್ನು ಬೀಸಿನಿಂದ ವಿಶಿಷ್ಟ ರೂಪಾಕೃತಿಗಳನ್ನು ಸೃಷ್ಟಿಸಿ ತಮ್ಮ ಪರಿಕರ್ಮ ಕೌಶಲವನ್ನು ಅಭಿವ್ಯಕ್ತಿಸುವುದು ರೂಢಿಗೆ ಬಂತು. ಇಂಥ ರೀತಿಯ ಹಲವು ಚಿತ್ರಗಳು ನಿರ್ಮಾಣವಾದವು. ವೇಲಾತ್‍ಕೇತ್‍ನಿಂದ ಸ್ಫೂರ್ತಿ ಪಡೆದ ಫ್ರೆಂಚ್ ಚಿತ್ರಕಾರ ಮಾನೆ ಅಮೆರಿಕದ ಸಾರ್ಜಂಟ್ ಮುಂತಾದವರು ಇಂಥ ಚಿತ್ರಗಳನ್ನು ರಚಿಸಿ ಕೀರ್ತಿವಂತಾದರು.

19 ನೆಯ ಶತಮಾನದ ಇಂಪ್ರೆಷೆನಿಸ್ಟ್ ಪಂಥದ (ಪರಿಣಾಮ ಫಂಥ) ಚಿತ್ರಕಾರರು ಇನ್ನೊಂದು ಹೊಸ ವಿಧಾನವನ್ನು ಕಂಡುಹಿಡಿದರು. 16 ಮತ್ತು 17 ನೆಯ ಶತಮಾನದ ಚಿತ್ರಕಾರರು ಗಾಢ ಪರಿಣಾಮ ಸಾಧಿಸಲೆಂದು ಕೇವಲ ಒಂದೋ ಎರಡೋ ಉಜ್ವಲವರ್ಣಗಳನ್ನು ಬಳಸುತ್ತಿದ್ದುದುಂಟು. ಆದರೆ 19 ನೆಯ ಶತಮಾನದ ಮಧ್ಯಭಾಗದಲ್ಲಿ ನಾನಾ ಬಗೆಯ ಉಜ್ವಲ ಬಣ್ಣಗಳನ್ನು ತಯಾರಿಸಲು ಸಾಧ್ಯವಾಯಿತು. ಆಗ ಅವನ್ನು ಉಪಯೋಗಿಸಿ ಚಿತ್ರಕಾರರು ಧೂಮ್ರ, ನೀಲ, ಉಜ್ವಲ ಹಸಿರುಗಳು, ಕಿತ್ತಳೆ ವರ್ಣಗಳು,  ವಿವಿಧ ನೀಲಿ ವರ್ಣಗಳು. ಗಾಢ ಹಳದಿ ಮುಂತಾದ ಹತ್ತಾರು ಬಗೆಯ ಉಜ್ವಲವೂ ಕೋಮಲವೂ ಆದ ಬಣ್ಣಗಳನ್ನು ಸಿದ್ಧಗೊಳಿಸಿ ತಮ್ಮ ವರ್ಣದ್ರವ್ಯದ ಸರಕನ್ನು ಶ್ರೀಮಂತಗೊಳಿಸಿಕೊಂಡರು. ಇದರಿಂದ ಕಣ್ಣ ನೋಟಕ್ಕೆ ಹೊಳೆಯುವಂತೆ ವ್ಯಾಪಕವಾದ ವರ್ಣ ವೈಖರಿಯನ್ನೂ ನೆಳಲು ಬೆಳಕಿನ ವಿನ್ಯಾಸವನ್ನೂ ಸೃಷ್ಟಿಸುವುದು ಇಂಪ್ರೆಷನಿಷ್ಟ್ ಪಂಥದವರಿಗೆ ಬಹು ಸುಲಭವಾಯಿತು.

20 ನೆಯ ಶತಮಾನದ ತೈಲಚಿತ್ರಕಾರರು ಆಧುನಿಕ ಜೀವನದ ತಾಕಲಾಟಗಳನ್ನು ಪ್ರತಿಧ್ವನಿಸುವಂತೆ ಹೊಸ ಹೊಸ ಪ್ರಯೋಗಗಳನ್ನು ನಡೆಸುತ್ತಿದ್ದಾರೆ. ಇಂದಿನ ಪ್ರಯೋಗಗಳಲ್ಲಿ ಕಲಾವಿದರ ಮಾನಸಿಕ ವ್ಯಗ್ರತೆಯನ್ನು ಸ್ಪಷ್ಟವಾಗಿ ಗುರ್ತಿಸಬಹುದಾಗಿದೆ. ಆದರೆ ಹೊಸ ವರ್ಣದ್ರವ್ಯಗಳನ್ನು ಕಂಡುಹಿಡಿದ 15 ನೆಯ ಶತಮಾನದ ಹಾಗೂ 19 ನೆಯ ಶತಮಾನದ ಸಂದರ್ಭದಲ್ಲಿ ತಲೆದೋರಿದ ಕ್ರಾಂತಿಕಾರಕ ಎನ್ನಬಹುದಾದ ಯಾವ ಪ್ರವೃತ್ತಿಗಳೂ ಇಂದು ಕಾಣಿಸುತ್ತಿಲ್ಲ. ಅಬ್‍ಸ್ಟ್ರಾಕ್ಟ್‍ಎಕ್ಸ್‍ಪ್ರೆಷನಿಸ್ಟ್ (ಅಮೂರ್ತ ಪರಿಣಾಮ) ಪಂಥದ ಚಿತ್ರಕಾರರು ಜೀವಂತ ಕ್ರಿಯೆಯೊಂದರ ಚಲನವಲನಗಳನ್ನು ಅಭಿವ್ಯಕ್ತಿಸುವಾಗ ಗೌಣವೂ ಅನಿರೀಕ್ಷಿತವೂ ಆದ ಅಂಶಗಳನ್ನು ಸೂಚಿಸಲು ಪ್ರಯತ್ನಿಸುತ್ತಿದ್ದಾರೆ. ತೈಲವರ್ಣಗಳ ಮಾಧ್ಯಮದಲ್ಲಿ ಮೂರನೆಯ ಆಯಾಮವನ್ನು (ತ್ರಿ ಡಿ ಎಫೆಕ್ಟ್) ತೋರಿಸುವ ರಚನಾಕೌಶಲವನ್ನು ಹೊರಗಿವನರು ತುಂಬ ಸೊಗಸಾಗಿ ದುಡಿಸಿಕೊಳ್ಳುತ್ತಿದ್ದಾರೆ.			(ಎಚ್.ಕೆ.ಆರ್.)

ಭಾರತ ಬ್ರಿಟಿಷರ ಕೈವಶವಾದ ಮೇಲೆ ಭಾರತೀಯ ಕಲೆ, ಸಂಸ್ಕøತಿಗಳ ಮೇಲೆ ಅವರ ಪ್ರಭಾವ ಸಾಕಷ್ಟು ಬೀಳತೊಡಗಿತು. ಜೊತೆಗೆ 19ನೆಯ ಶತಮಾನದ ಕೊನೆಯಲ್ಲಿ, ಭಾರತೀಯ ಚಿತ್ರಕಾರರು ವಂಶಪಾರಂಪರ್ಯವಾಗಿ ಬೆಳೆಸಿಕೊಂಡು ಬಂದ ಕಲಾಪದ್ಧತಿಗೆ ಬೆಂಬಲ ಕಡಿಮೆಯಾಗುತ್ತ ಬಂತು. ಬಹುಮಂದಿ ಪಾಶ್ಚಾತ್ಯರನ್ನು ಅನುಕರಿಸತೊಡಗಿದರು.

ಪಾಶ್ಚಾತ್ಯ ಶೈಲಿಯ ಚಿತ್ರರಚನಾ ತರಬೇತಿ ಶಾಲೆಗಳು ಭಾರತದ ಕೆಲವು ಕಡೆ ಹುಟ್ಟಿಕೊಂಡುವು. ವರ್ಣಮಾಧ್ಯಮವೂ ಬದಲಾಯಿತು. ಪೂರ್ವಿಕರು ಮೂಲಿಕೆಗಳಿಂದ ತಾವೇ ತಮ್ಮ ಬಣ್ಣಗಳನ್ನು ತಯಾರಿಸಿಕೊಂಡು ಉಪಯೋಗಿಸುತ್ತಿದ್ದರು. ಅದೂ ಜಲವರ್ಣದ ಬಣ್ಣಗಳೇ ಹೆಚ್ಚು ಉಪಯೋಗದಲ್ಲಿತ್ತು. ಕಲ್ಕತ್ತ, ಮುಂಬಯಿ, ಮೈಸೂರು ಮುಂತಾದ ಕಡೆ ತೆರೆದ ಪಾಶ್ಚಾತ್ಯರ ಕಲಾ ಶಾಲೆಗಳಲ್ಲಿ ವಿದೇಶಗಳಿಂದ ತರಿಸಿಕೊಂಡ ಬಣ್ಣಗಳ ಉಪಯೋಗ ಬಳಕೆಗೆ ಬಂತು. ತೈಲವರ್ಣಕ್ರಮ ಅಂದು ಪ್ರಾರಂಭವಾಯಿತೆನ್ನಬಹುದು. ಪಾಶ್ಚಾತ್ಯ ದೇಶಗಳಲ್ಲಿ ಅದರಲ್ಲೂ ಬ್ರಿಟನ್ನಿನಲ್ಲಿ ತಯಾರಾದ ತೈಲ ವರ್ಣಗಳು ಆಗ ಬಹಳ ಪ್ರಸಿದ್ಧಿಯಾಗಿದ್ದುವು. ವಿನ್‍ಸರ್ ಅಂಡ್ ನ್ಯೂಟನ್ ಮಾತ್ರ ಅಂದಿಗೆ ಲೋಕಪ್ರಸಿದ್ಧಿ ಪಡೆದ ಬಣ್ಣ ತಯಾರಿಕೆಯ ಕಂಪನಿಯಾಗಿತ್ತು.
ಬ್ರಿಟಿಷರು ಅವರ ಅನೇಕ ಚಿತ್ರಕಾರರಿಂದ ಕೃತಿಗಳನ್ನು ಬರೆಸಿ ಅವನ್ನು ಭಾರತದ ಸಂಗ್ರಹಾಲಯಗಳಲ್ಲಿ ಪ್ರದರ್ಶಿಸುತ್ತ ಬಂದರು. ಕಲಾಶಾಲೆಗಳಲ್ಲೂ ವಿದ್ಯಾರ್ಥಿಗಳಿಗೆ ತೈಲವರ್ಣ ಬಳಕೆಯ ತಂತ್ರವನ್ನು ತೋರಿಸಿಕೊಟ್ಟರು. ಹಾಗೆ ಕಲಿತ ಖ್ಯಾತ ಕಲಾವಿದರಲ್ಲಿ ತಿರುವಾಂಕೂರು ರಾಜಮನೆತನದಲ್ಲಿ ಹುಟ್ಟಿದ ರಾಜಾ ರವಿವರ್ಮನೂ (1848-1906) ಒಬ್ಬ. ನವ್ಯಮಾರ್ಗದಲ್ಲಿ ಚಿತ್ರ ರಚಿಸಿದವರಲ್ಲಿ ಮೊದಲ ಭಾರತೀಯ ಕಲಾವಿದೆಯೆಂದರೆ ಅಮೃತ್ ಶೇರ್‍ಗಿಲ್. ಈಕೆ 1930ರಲ್ಲಿ ತೈಲವರ್ಣಗಳನ್ನು ತನ್ನ ಚಿತ್ರರಚನೆಗಾಗಿ ಬಳಸಿದಳು. ಈಕೆಯ ಕಲಾರೀತಿ ಅನೇಕ ಭಾರತೀಯ ಕಲಾವಿದರ ಕಣ್ಣು ತೆರೆಯಿಸಿತು.
ತೈಲಚಿತ್ರ ರಚನೆಯಲ್ಲಿ ಕೆಲವರು ಭಾವಚಿತ್ರಗಳನ್ನು, ಕೆಲವರು ಸಂಯೋಗ ಚಿತ್ರಗಳನ್ನು ಇನ್ನು ಕೆಲವರು ನಿಸರ್ಗ ಚಿತ್ರಗಳನ್ನು ಇಲ್ಲವೇ ನಿರ್ಜೀವ ವಸ್ತು ಚಿತ್ರಗಳನ್ನು ಸೊಗಸಾಗಿ ರಚಿಸಿ ಹೆಸರಾಗಿದ್ದಾರೆ. ಇಂಥ ಖ್ಯಾತರಲ್ಲಿ ಜೆ.ಪಿ. ಗಂಗೂಲಿ, ಅತುಲ ಬೋಸ್, ಧುರಂಧರ, ತ್ರಿನಾದಾದೆ, ಹಳದಣಕರ್, ಗೋಪಾಲ ದೇವುಸ್ಕರ, ಸಾತವಳಕರ, ದಿಲೀಪ್ ದಾಸಗುಪ್ತ ಮೊದಲಾದವರನ್ನು ಹೆಸರಿಸಬಹುದು. ಸ್ವಾತಂತ್ರ್ಯದ ತರುವಾಯ ಫ್ರೆಂಚ್, ಮೆಕ್ಸಿಕನ್ ಮತ್ತು ಇತರೆ ಶೈಲಿಗಳು ಬಳಕೆಗೆ ಬಂದವು. ತೈಲವರ್ಣದ ಬಳಕೆಯಲ್ಲಿ ಜಾರ್ಜ್ ಕೀಟ್ (ಸಿಲೋನ್), ಹುಸೇನ್, ಹೆಬ್ಬಾರ್, ರಾಮಕಿಂಕರ, ಎನ್. ಎಸ್. ಬೇಂದ್ರೆ, ಕೃಷ್ಣ ಕನ್ನ, ನೀರದ ಮುಜಂದಾರ್, ರಾಂ ಕುಮಾರ್, ಬೀರನ್ ಸೇನ್, ಪಣಿಕ್ಕರ್, ಸುಬ್ರಹ್ಮಣ್ಯನ್, ಪಿ. ಸೇನ್, ಕೆ.ಎಸ್. ಕುಲಕರ್ಣಿ, ಚಾವ್ಡ, ಲಕ್ಷ್ಮಣ ಪೈ. ಆರ್.ಮೊದಲಾದ ಕಲಾವಿದರು ತಮ್ಮ ಸಾಧನೆಯನ್ನು ಮೆರೆಯುತ್ತ ಬಂದಿದ್ದಾರೆ.

ಬ್ರಿಟನ್, ಅಮೇರಿಕ, ಜಪಾನ್, ಮುಂತಾದ ಕಡೆ ತೈಲವರ್ಣಗಳ ಹಾಗೂ ವಿಶಿಷ್ಟ ಕುಂಚ ತಯಾರಿಕೆಯ ದೊಡ್ಡ ದೊಡ್ಡ ಕಂಪೆನಿಗಳು ಇವೆ. ಮೊದಲಿಗೆ ಅಲ್ಲಿಂದಲೇ ಭಾರತಕ್ಕೆ ಬಣ್ಣ ಆಮದಾಗುತ್ತಿತ್ತು. ಈಗ ಭಾರತದಲ್ಲೇ ತೈಲವರ್ಣ ತಯಾರಿಕೆ ಕಂಪೆನಿಗಳು ಹುಟ್ಟಿಕೊಂಡಿವೆ. ಕ್ಯಾಮಲಿನ್ ಕಂಪೆನಿ ಅಂಥ ಪ್ರಸಿದ್ಧ ಕಂಪೆನಿಗಳಲ್ಲಿ ಒಂದು. ಕುಂಚಗಳೂ ಈಗ ಇಲ್ಲೇ ತಯಾರಾಗುತ್ತಿವೆ. 
(ಪಿ.ಆರ್.ಟಿ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ